ಜ್ವಾಲಾಮುಖಿಯ ವಿಧಗಳು
ಷೀಲ್ಡ್ ಜ್ವಾಲಾಮುಖಿಗಳು
ಹವಾಯ್ ಮತ್ತು ಐಸ್ಲ್ಯಾಂಡ್ಗಳಲ್ಲಿ ಜ್ವಾಲಾಮುಖಿಗಳು ಕಲ್ಲಿನಂಶ ಹೆಚ್ಚಾಗಿರುವ ಲಾವಾವನ್ನು ಉಗುಳುತ್ತವೆ. ಈ ಕಲ್ಲುಮಣ್ಣಿನಂಶ ಕ್ರಮೇಣ ಸಂಗ್ರಹವಾಗುತ್ತ ಪರ್ವತದ ರೂಪವನ್ನು ತಾಳುತ್ತದೆ. ಈ ಜ್ವಾಲಾಮುಖಿಗಳ ಲಾವಾ ಅತಿ ಬಿಸಿಯಾಗಿದ್ದು ದ್ರವದ ಅಂಶವನ್ನು ಹೆಚ್ಚಾಗಿ ಒಳಗೊಂಡಿರುತ್ತದೆ ಅಲ್ಲದೆ ಈ ಲಾವಾದ ಹರಿವು ಕೂಡ ದೀರ್ಘವಾಗಿರುವುದು. ಇಂತಹ ಜ್ವಾಲಾಮುಖಿಗಳನ್ನು ಷೀಲ್ಡ್ ಜ್ವಾಲಾಮುಖಿಗಳೆಂದು ಕರೆಯಲಾಗುತ್ತದೆ. ಸೌರಮಂಡಲದಲ್ಲಿ
ಕುಜ ಗ್ರಹದ ಮೇಲಿರುವ ಒಲಿಂಪಸ್ ಮಾನ್ಸ್ ಅತಿ ದೊಡ್ಡ ಷೀಲ್ಡ್ ಜ್ವಾಲಾಮುಖಿಯಾಗಿದ್ದರೆ ಭೂಮಿಯ ಮೇಲೆ ಹವಾಯ್ ದ್ವೀಪದ ಮೌನಾ ಲೋವಾ ಅತಿ ಎತ್ತರವುಳ್ಳದ್ದಾಗಿದೆ.
ಸಿಂಡರ್ ಕೋನ್ಸ್
ಕೆಲವು ಜ್ವಾಲಾಮುಖಿಗಳು ಮಂದ ದ್ರವದ ರೂಪದ ಮ್ಯಾಗ್ಮಾ ಮತ್ತು ಲಾವಾಗಳಿಗಿಂತ ಹೆಚ್ಚಾಗಿ ಅತಿಯಾಗಿ ಕಾದ ಕಬ್ಬಿಣ ದ ಮತ್ತು ಕಲ್ಲಿನ ಸಣ್ಣಸಣ್ಣ ತುಣುಕುಗಳನ್ನು ಹೊರಗೆಸೆಯುತ್ತವೆ. ಈ ತುಣುಕುಗಳು ಕೆಂಡದಂತಿರುವುದರಿಂದ ಇಂತಹ ಜ್ವಾಲಾಮುಖಿಗಳಿಗೆ ಸಿಂಡರ್ ಕೋನ್ಸ್ ಅಥವಾ ಕೆಂಡದ ಶಂಕುಗಳೆನ್ನುವರು. ಈ ತುಣುಕುಗಳು ಜ್ವಾಲಾಮುಖಿಯ ಬಾಯಿಯ ಸುತ್ತ ಸಂಗ್ರಹವಾಗತೊಡಗಿ ೩೦ ರಿಂದ ೪೦೦ ಮೀಟರ್ಗಳಷ್ಟು ಎತ್ತರದ ಸಣ್ಣ ಗುಡ್ಡಗಳನ್ನು ಸೃಷ್ಟಿಸುವುದಿದೆ. ಹೆಚ್ಚಿನ ಸಿಂಡರ್ ಕೋನ್ ಗಳು ಒಮ್ಮೆ ಮಾತ್ರ ಸಿಡಿಯುತ್ತವೆ. ಇವು ಕೆಲವೊಮ್ಮೆ ದೊಡ್ಡ ಜ್ವಾಲಾಮುಖಿಯ ಪಾರ್ಶ್ವದಲ್ಲಿ ಇನ್ನೊಂದು ಬಾಯಿಯಂತೆ ಸಹ ಇರುವುದಿದೆ. ಮೆಕ್ಸಿಕೋದ ಪರಿಕ್ಯುಟಿನ್ ಜ್ವಾಲಾಮುಖಿ ಮತ್ತು ಅರಿಜೋನಾದ ಸನ್ಸೆಟ್ ಜ್ವಾಲಾಮುಖಿ ಇಂತಹ ಸಿಂಡರ್ ಕೋನ್ ಗೆ ಉದಾಹರಣೆಗಳು.
ಸ್ಟ್ರಾಟೋ ಜ್ವಾಲಾಮುಖಿಗಳು
ಇವಕ್ಕೆ ಕಾಂಪೊಸಿಟ್ ಜ್ವಾಲಾಮುಖಿಗಳೆಂದು ಇನ್ನೊಂದು ಹೆಸರು. ಇವುಗಳಲ್ಲಿ ಲಾವಾ, ಕೆಂಡ ಮತ್ತು ಬೂದಿಗಳು ಬೇರೆಬೇರೆ ಹಂತದಲ್ಲಿ ಹೊರಬೀಳುವುವು. ಮೊದಲು ಬೂದಿ ಮತ್ತು ಕೆಂಡಗಳು ಉಗಿಯಲ್ಪಟ್ಟು ಒಂದು ಪದರವನ್ನು ರಚಿಸುವುವು. ಈ ಪದರದ ಮೇಲೆ ಲಾವಾ ಹರಿಯುತ್ತದೆ. ಈ ಲಾವಾ ಒಣಗಿ ಮತ್ತು ತಣ್ಣಗಾಗಿ ಮತ್ತೊಂದು ಪದರ ಸೃಷ್ಟಿಸುವುದು. ಈ ಚಕ್ರ ಮತ್ತೆಮತ್ತೆ ಪುನರಾವರ್ತಿಯಾಗುವುದು. ಜಪಾನ್ ದೇಶದ ಫ್ಯೂಜಿ ಪರ್ವತ, ಫಿಲಿಪ್ಪೀನ್ಸ್ ನ ಮೇಯನ್ ಪರ್ವತ ಮತ್ತು ಇಟಲಿ ಯ
ವೆಸೂವಿಯಸ್ ಪರ್ವತಗಳು ಇಂತಹ ಜ್ವಾಲಾಮುಖಿಗಳಿಗೆ ಉದಾಹರಣೆಗಳು.
ಸೂಪರ್ ಜ್ವಾಲಾಮುಖಿಗಳು
ಅತ್ಯಂತ ದೊಡ್ಡದಾಗಿದ್ದು ಬೃಹತ್ ಬಾಯುಳ್ಳ ಜ್ವಾಲಾಮುಖಿಗಳು ಸ್ಫೋಟಿಸಿದಾಗ ಭಾರಿ ಪ್ರಮಾಣದ ಅನಾಹುತವಾಗುವುದಿದೆ. ಕೆಲವೊಮ್ಮೆ ಇಡಿ ಭೂಖಂಡ ವೇ ಇದರಿಂದ ಪ್ರಭಾವಿತವಾಗಬಹುದು. ಇಂತಹ ಮಹಾಜ್ವಾಲಾಮುಖಿಗಳನ್ನು ಸೂಪರ್ ಜ್ವಾಲಾಮುಖಿಗಳೆಂದು ಕರೆಯುವರು. ಇವು ಒಮ್ಮೆ ಸ್ಫೋಟಿಸಿದ ನಂತರ ಜಾಗತಿಕ ತಾಪಮಾನವು ಹಲವು ವರ್ಷಗಳವರೆಗೆ ಕುಸಿತ ಕಾಣುವುದಿದೆ. ಬೃಹತ್ ಪ್ರಮಾಣದಲ್ಲಿ ಬೂದಿ ಮತ್ತು
ಗಂಧಕಗಳು ಹೊರಗೆಸೆಯಲ್ಪಡುವುದರಿಂದ ಹೀಗಾಗುತ್ತದೆ. ಇಂತಹ ಜ್ವಾಲಾಮುಖಿಗಳು ಜಗತ್ತಿಗೆ ಅತಿ ಅಪಾಯಕಾರಿಯಾಗಿರುವುವು. ಇವಕ್ಕೆ ಉದಾಹರಣೆಗಳೆಂದರೆ ಯು.ಎಸ್.ಎ ನ
ಯೆಲ್ಲೋಸ್ಟೋನ್ ಅಗ್ನಿಪರ್ವತ,
ನ್ಯೂಜಿಲೆಂಡ್ ನ ಲೇಕ್ ಟೌಪೋ,
ಇಂಡೋನೇಷ್ಯಾ ದ ಲೇಕ್ ಟೋಬಾ.
ಸಾಗರದಾಳದ ಜ್ವಾಲಾಮುಖಿಗಳು
ನೆಲದ ಮೇಲಿರುವುದಕ್ಕಿಂತ ಅತಿ ಹೆಚ್ಚಿನ ಸಂಖ್ಯೆಯ ಜ್ವಾಲಾಮುಖಿಗಳು ಸಾಗರದಾಳದಲ್ಲಿವೆ. ಇವುಗಳಲ್ಲಿ ಹಲವಷ್ಟು ಸಕ್ರಿಯವಾಗಿವೆ. ನೀರಿನಾಳ ಕಡಿಮೆಯಿರುವಲ್ಲಿ ಈ ಜ್ವಾಲಾಮುಖಿಗಳು
ಹಬೆ ಮತ್ತು ಕಲ್ಲುಮಣ್ಣುಗಳನ್ನು ನೀರಿನಿಂದ ಮೇಲಕ್ಕೆ ಉಗಿಯುತ್ತಿರುತ್ತವೆ. ಇನ್ನು ಕೆಲವು ನೀರಿನಲ್ಲಿ ಬಲು ಆಳದಲ್ಲಿರುತ್ತವೆ. ನೀರಿನ ಅತಿಯಾದ ಭಾರದಿಂದಾಗಿ ಈ ಜ್ವಾಲಾಮುಖಿಗಳು ಹೊರಗೆಸೆಯುವ ಹಬೆ, ಅನಿಲಗಳು ಮತ್ತು ಕಲ್ಲುಮಣ್ಣುಗಳ ವೇಗ ಸಾಕಷ್ಟು ಕುಂಠಿತವಾಗಿ ನೀರಿನಿಂದ ಮೇಲಕ್ಕೆ ಬಹಳ ಸಂದರ್ಭಗಳಲ್ಲಿ ತಲುಪುವುದಿಲ್ಲ.
ಹಿಮನದಿ ಯ ಅಡಿಯಲ್ಲಿ ಜ್ವಾಲಾಮುಖಿಗಳು
ಇವು ಹಿಮದ ಹೊದಿಕೆಯಡಿಯಲ್ಲಿ ರಚನೆಯಾಗುತ್ತವೆ. ಹಿಮದ ಅಡಿಯಲ್ಲಿ ಸ್ಫೋಟ ಸಂಭವಿಸಿ ಮಟ್ಟಸವಾದ ಲಾವಾದ ಹರಿವಿನಿಂದಾಗಿ ಈ ಜ್ವಾಲಾಮುಖಿಗಳು ರಚನೆಯಾಗುತ್ತವೆ. ಮೇಲ್ಭಾಗದ ಹಿಮದ ಹೊದಿಕೆ ಕರಗಿದಾಗ ಲಾವಾ ಸಹ ಕುಸಿದು ಸಮತಟ್ಟಾದ ಶಿಖರವುಳ್ಳ ಅಗ್ನಿಪರ್ವತ ಸೃಷ್ಟಿಯಾಗುತ್ತದೆ. ಐಸ್ಲ್ಯಾಂಡ್ ಮತ್ತು ಬ್ರಿಟಿಷ್ ಕೊಲಂಬಿಯಗಳಲ್ಲಿ ಇಂತಹ ಜ್ವಾಲಾಮುಖಿಗಳು ಕಾಣಬರುತ್ತವೆ.
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments